ಕರ್ಮಯೋಗ 
ಮಾನವ ಶಾಶ್ವತ ಸುಖಶಾಂತಿಗಳ ಅನ್ವೇಷಣೆಯ ಕಾರ್ಯದಲ್ಲಿ ಬಾಳಿನ ಕೆಲವು ಮೂಲತತ್ತ್ವಗಳನ್ನು ಅರಿತುಕೊಂಡು ಅವುಗಳ ಆಧಾರದ ಮೇಲೆ ಕೆಲವು ಸಿದ್ಧಾಂತಗಳನ್ನು ರೂಪಿಸಿಕೊಂಡಿದ್ದಾನೆ. ಭಾರತೀಯ ಧರ್ಮಗಳಲ್ಲಿ ಕಂಡುಬರುವ ಕರ್ಮವಾದ ಈ ರೀತಿಯದು. ಕರ್ಮದಂತೆ ಫಲ ಎಂಬ ಅದರ ನಿಯಮವನ್ನು ವಿಶಾಲವಾಗಿ ಅನ್ವಯಿಸಿಕೊಂಡು, ಬಾಳಿನ ಸಮಸ್ಯೆಗಳನ್ನು ಪರಿಹರಿಸಲು ಹೊರಟವರಲ್ಲಿ ಎರಡು ಪಂಥಗಳಾದುವು ಇಷ್ಟವಾದ ಫಲಗಳಲ್ಲಿಯೇ ಹೆಚ್ಚು ದೃಷ್ಟಿಯನ್ನಿಟ್ಟು ತತ್ಪ್ರಾಪ್ತಿಗಾಗಿ ತಕ್ಕ ಕರ್ಮಗಳ ಆಚರಣೆಯಲ್ಲಿಯೇ ತಾತ್ಪರ್ಯ ಕಂಡವರು. ಸ್ವರ್ಗಾದಿ ಭೋಗಗಳೇ ಅಂತಿಮ ಗುರಿ ಎಂದರಿತು. ಅದರ ಸಾಧನೆಗಾಗಿ ಯಾಗ ಯಜ್ಞಾದಿ ಕರ್ಮಗಳಲ್ಲಿಯೇ ನಿರತರಾದ ವೈದಿಕ ಕರ್ಮ ಮಾರ್ಗಿಗಳು ಈ ಸಂಪ್ರದಾಯದವರು. ಅನಿಷ್ಟ ಫಲಗಳಲ್ಲಿಯೇ ಹೆಚ್ಚು ದೃಷ್ಟಿಯನ್ನಿಟ್ಟು ಕರ್ಮಗಳಿಂದಲೇ ಬಂಧನ ಆದ್ದರಿಂದ ಅವು ತ್ಯಾಜ್ಯವೆಂದು ಇತ್ಯರ್ಥ ಮಾಡಿ, ನೈಷ್ಕರ್ಮವೇ ಜೀವನದ ಗುರಿಯೆಂದೂ ಕರ್ಮಸಂನ್ಯಾಸವೇ ಮುಕ್ತಿಗೆ ಹಾದಿಯೆಂದೂ ವಾದಿಸಿದವರು ಕೆಲವರು. ಸಮಗ್ರ ಜೀವನಕಲೆಯ ಶಾಸ್ತ್ರವಾದ ಭಗವದ್ಗೀತೆಯಲ್ಲಿ ಪರಸ್ಪರ ವಿರೋಧಿಗಳೆಂದು ತೋರುವ ಈ ಕರ್ಮಾಚರಣೆ ಮತ್ತು ಕರ್ಮಸಂನ್ಯಾಸಗಳನ್ನು ಸಮನ್ವಯಗೊಳಿಸುವ ಪ್ರಯತ್ನ ನಡೆದಿದೆ. ಅದರ ಫಲವೇ ಕರ್ಮಯೋಗವೆಂಬ ಗೀತಾಭಾಗ. ಇದು ಆ ಉದ್ಗ್ರಂಥದ ಒಂದು ಅಪೂರ್ವ ವೈಶಿಷ್ಟ್ಯ.

ಭಗವದ್ದರ್ಶನ, ಪರಮಾತ್ಮಸಾಕ್ಷಾತ್ಕಾರ, ಬ್ರಹ್ಮನಿರ್ವಾಣ ಇತ್ಯಾದಿ ವಿವಿಧ ರೀತಿಯಲ್ಲಿ ನಿರ್ದೇಶಿಸಲ್ಪಟ್ಟ ಪರಿಪೂರ್ಣತೆಯ ಲಾಭವೇ ಜೀವನದ ಮುಖ್ಯ ಗುರಿ; ಅದೇ ಯೋಗ. ಕರ್ಮದ ಮೂಲಕ ಇದನ್ನು ಸಾಧಿಸುವುದೇ ಕರ್ಮಯೋಗ. ಸ್ವಜನಮೋಹದಿಂದ, ಪಾಪಭೀತಿಯಿಂದ, ಕರ್ತವ್ಯಭ್ರಷ್ಟನಾಗಿ ಕರ್ಮಸಂನ್ಯಾಸವೇ ಶ್ರೇಯಸ್ಕರವೆಂದು ಭಾವಿಸಿದ್ದ ಅರ್ಜುನನಿಗೆ, ತದ್ವಾರಾ ಮಾನವ ಕುಲಕ್ಕೆ, ಕರ್ಮದ ನಿಜಸ್ವರೂಪ, ಪ್ರಯೋಜನಗಳನ್ನು ತಿಳಿಸಲು ಹೊರಟ ಬೋಧನೆಯೇ ಕರ್ಮಯೋಗ. 

ಕರ್ಮವನ್ನು ಕೈಗೊಳ್ಳಲೇಬೇಕೆ, ಯಾವ ಯಾವ ಕರ್ಮಗಳನ್ನು, ಏಕೆ, ಹೇಗೆ, ಕರ್ಮತ್ಯಾಗ ಸಾಧ್ಯವೇ, ಎಷ್ಟರಮಟ್ಟಿಗೆ, ಈ ರೀತಿಯ ವಿಚಾರಗಳ ವಿಮರ್ಶೆ ಮತ್ತು ತತ್ಫಲ ನಿಶ್ಚಿತಾಭಿಪ್ರಾಯಗಳನ್ನು ಗೀತೆಯಲ್ಲಿ ವಿಶೇಷವಾಗಿ ೨, ೩, ೪, ೫ ಮತ್ತು ೧೮ನೆಯ ಅಧ್ಯಾಯಗಳಲ್ಲಿ ಕಾಣುತ್ತೇವೆ.

ದೇಹಧಾರಿಯಾದ, ದೇಹಬುದ್ಧಿಯುಳ್ಳ, ಜೀವಿಗೆ ಕರ್ಮ ಅನಿವಾರ್ಯ. ಕರ್ಮ ಉತ್ಪಾದಕ ಪ್ರಕೃತಿಗೆ ಅಧೀನನಾದ ಆತ ಅವಶ್ಯವಾಗಿ ಒಂದಲ್ಲ ಒಂದು ಕರ್ಮದಲ್ಲಿ ತೋಡಗಿಯೇ ಇರುತ್ತಾನೆ. ಕೇವಲ ಕರ್ಮೇಂದ್ರಿಯಗಳ ನಿರೋಧವೇ ಅಕರ್ಮವಲ್ಲ. ಅಂತರಂಗದಲ್ಲಿ ವಿಷಯಚಿಂತನಾರೂಪದ ಕ್ರಿಯೆ ನಡೆಯುತ್ತಲೇ ಇರಬಹುದು. ಕೇವಲ ಬಾಹ್ಯ ನಿರೋಧದಿಂದ ಆಧ್ಯಾತ್ಮಿಕ ಲಾಭವಿಲ್ಲ. ಇದು ಮಿಥ್ಯಾಚಾರ ಮಾತ್ರ, ಪರಿಣಾಮದಲ್ಲಿ ಅನರ್ಥಕಾರಿ. ಇದಕ್ಕೆ ಬದಲಾಗಿ ಅಂತರಂಗದಲ್ಲಿ ಸಂಯಮವಿದ್ದು, ಕರ್ಮೇಂದ್ರಿಯಗಳಿಂದ ಅನಾಸಕ್ತ ರೀತಿಯಲ್ಲಿ ಕಾರ್ಯವಂತನಾಗುವುದೇ ಶ್ರೇಯಸ್ಕರ; ಅದೇ ಕರ್ಮಯೋಗ, ನಿಯತವಾದ ಕರ್ಮವನ್ನು ಮಾಡಲೇಬೇಕು. ಅಕರ್ಮಕ್ಕಿಂತ ಕರ್ಮ ಶ್ರೇಷ್ಠ. ಕರ್ಮವಿಲ್ಲದೇ ಜೀವನಯಾತ್ರೆ ಸಾಗದು. ಇನ್ನು ಪರಮಾರ್ಥಸಾಧನೆಯೆಲ್ಲಿ ?
ವಾಸ್ತವವಾಗಿ ಬಂಧಿಸುವುದು ಕರ್ಮವಲ್ಲ-ನಾನು ಇದರ ಕರ್ತ, ಇದರ ಫಲ ನನಗೆ ಎಂಬ ಆಸಕ್ತಿ ಮಾತ್ರ. ತುಚ್ಛ ಸ್ವಾರ್ಥಭಾವನೆ ಬಂಧನಕ್ಕೆ ಕಾರಣವಾದರೆ, ಉಚ್ಚ ಪರಾರ್ಥ, ಪರಮಾರ್ಥಭಾವನೆ ಮುಕ್ತಿಗೆ ಸಾಧನವಾಗುತ್ತದೆ; ಕರ್ಮವನ್ನು ಯಜ್ಞವನ್ನಾಗಿ ಪರಿವರ್ತಿಸುತ್ತದೆ. ಸ್ವರ್ಗಾದಿಭೋಗ ದೃಷ್ಟಿಯಿಂದ, ಇಂದ್ರಾದಿ ದೇವತೆಗಳ ತುಷ್ಟಿಗಾಗಿ, ಅಗ್ನಿಗೆ ಆಹುತಿ ಅರ್ಪಿಸುವ ಕರ್ಮ ಮಾತ್ರ ಯಜ್ಞವಲ್ಲ. ನಿಸ್ಸ್ವಾರ್ಥ, ನಿಸ್ಸಂಗ, ದೈವಸಮರ್ಪಿತ ಕರ್ಮವೇ ನಿಜವಾದ ಯಜ್ಞ. ಇಂಥ ಯಜ್ಞ ಎಂದಾದರೊಮ್ಮೆ ಮಾಡುವ ನೈಮಿತ್ತಿಕ ಕರ್ಮವಲ್ಲ. ಅದು ಜೀವನದ ಒಂದು ನಿತ್ಯ ಅಂಗ, ಸೃಷ್ಟಿಧರ್ಮದ ಮೂಲ ತತ್ತ್ವ. ಮಾನವಕುಲದ ಭುಕ್ತಿಮುಕ್ತಿಗಳಿಗೆ ದ್ವಾರ. ಮಾನವನ ಯಾವುದೇ ಕ್ರಿಯೆಯನ್ನಾಗಲಿ, ಶಕ್ತಿಯನ್ನಾಗಲಿ ನೀಚ, ಅಲ್ಪ ಪ್ರವೃತ್ತಿಗೊಳಗಾಗದಂತೆ ನಿರೋಧಿಸಿ, ಉಚ್ಚ ಉತ್ತಮ ಧ್ಯೇಯಕ್ಕೆ ಸಮರ್ಪಿಸುವುದೇ ಯಜ್ಞ. ಕರ್ಮವೇ ಮೂಲವಾದ ಈ ರೀತಿಯ ವಿವಿಧ ಯಜ್ಞಗಳು ವೇದಗಳಲ್ಲಿ ನಿರೂಪಿತವಾಗಿವೆ. ಈ ರೀತಿಯ ಯಜ್ಞರೂಪ ಕರ್ಮದಿಂದ ಸರ್ವ ಪಾಪವಿಮೋಚನ; ಸ್ವಾರ್ಥಕರ್ಮದಿಂದ ಕೇವಲ ಪಾಪಭೋಜನ. ಇಂಥ ಯಜ್ಞಾಚರಣೆಯಿಂದ ಚಿತ್ತಶುದ್ಧಿಯಾಗಿ, ಜ್ಞಾನಾಗ್ನಿ ಬೆಳಗಿ, ಸಕಲ ಪಾಪಗಳೂ ಭಸ್ಮವಾಗಿ, ಮುಕ್ತಿಯ ದ್ವಾರ ತೆರೆಯುತ್ತದೆ. ಈ ಯಜ್ಞ ವಿಧಾನದಿಂದ ಮಾಡಿದ ಕರ್ಮಫಲ ಅಮೃತವಾಗಿ ಪರಿಣಮಿಸಿ, ಅದನ್ನು ಭುಜಿಸುವ ಮಾನವನನ್ನು ಸನಾತನ ಬ್ರಹ್ಮನೆಡೆ ಒಯ್ಯುತ್ತದೆ. ಯಜ್ಞರಹಿತನಿಗೆ ಇಹದಲ್ಲೂ ಸ್ಥಾನವಿಲ್ಲವೆಂದ ಮೇಲೆ ಪರದ ಪ್ರಶ್ನೆಯೇ ಏಳದು.
ಫಲಾಸಕ್ತಿಯೇ ಬಂಧನಕಾರಿ, ಕೇವಲ (ಅಲ್ಪ) ಫಲಕ್ಕಾಗಿ ಕರ್ಮ ಮಾಡತಕ್ಕವರು ಕೃಪಣರು. ಕರ್ಮಫಲದಲ್ಲಿ ಆಸಕ್ತಿ ತೊರೆದ ಬುದ್ಧಿವಂತರೇ ಜನ್ಮಬಂಧದಿಂದ ಮುಕ್ತರಾಗಿ ಪರಮಸುಖಿಗಳಾಗುತ್ತಾರೆ. ಕೈಗೊಂಡ ಕರ್ಮದ ಸಿದ್ಧಿ ಅಸಿದ್ಧಿಗಳಲ್ಲಿ ನಿರ್ವಿಕಾರತೆ, ಸಮತಾಭಾವಗಳೇ ಯೋಗ. ಫಲಾಸಕ್ತಿಯಿಲ್ಲದ, ಶ್ರದ್ಧೆ ಮತ್ತು ನಿಷ್ಠಾಯುತ ಆಚರಣೆಯಿಂದ, ಬಂಧಿಸಬಹುದಾದ ಕರ್ಮವೂ ಮುಕ್ತಿಗೆ, ಪರಮಶ್ರೇಯಸ್ಸಿಗೆ, ಸಹಕಾರಿಯಾಗುತ್ತದೆ. ಈ ರೀತಿಯ ಕರ್ಮಕುಶಲತೆಯೇ ಯೋಗ.

ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕರ್ಮ ಅನಿವಾರ್ಯ. ಜನಕಾದಿ ಮಹಾ ವ್ಯಕ್ತಿಗಳೂ ಕರ್ಮದಿಂದಲೇ ಸಂಸಿದ್ಧಿ ಪಡೆದರು. ತಾನು ಮುಕ್ತನಾದರೂ ಲೋಕ ಹಿತದ ದೃಷ್ಟಿಯಿಂದಲಾದರೂ ವ್ಯಕ್ತಿ ಕರ್ಮವನ್ನು ಮಾಡಲೇಬೇಕು. ಆಪ್ತಕಾಮನಾದ ಕೃತಕೃತ್ಯನಿಗೆ ಆನಂದ ಸುಖಗಳೆಲ್ಲ ತನ್ನಲ್ಲಿಯೇ ಇದ್ದು, ಬಾಹ್ಯ ಕರ್ಮದ ಅವಲಂಬನೆಯ ಅಗತ್ಯವಿಲ್ಲದಿದ್ದರೂ ಪ್ರಕೃತಿಬದ್ಧ, ಬಾಹ್ಯಾರ್ಥ ಜೀವಿಗಳ ಹಿತದ ದೃಷ್ಟಿಯಿಂದ, ಕರ್ಮದ ತ್ಯಾಗವಾಗಲೀ ಖಂಡನೆಯಾಗಲೀ ಆತನಿಗೆ ಸಲ್ಲದು. ಜಗತ್ತಿನಲ್ಲಿ ಶ್ರೇಷ್ಠರೆನಿಸಿಕೊಂಡವರ ಆಚರಣೆಯೇ ಇತರರಿಗೆ ಮೇಲ್ಪಂಕ್ತಿಯಾಗುತ್ತದೆ. ಆದ್ದರಿಂದ ಜ್ಞಾನಿ ತನ್ನ ಜೀವನರೀತಿಯಿಂದ ಇತರರನ್ನು ತಾಮಸಿಕ ನಿಷ್ಕ್ರಿಯರಾಗುವಂತೆ ಮಾಡುವುದು ನ್ಯಾಯವಲ್ಲ. ಕರ್ಮಾಸಕ್ತ ಮಂದಮತಿಗಳಿಗೆ ಆತ ಮಾರ್ಗದರ್ಶಿಯಾಗ ಬೇಕಾದುದು, ಅನಾಸಕ್ತ ಕರ್ಮಾಚರಣೆಯಿಂದ ಹೊರತು ನಿಷ್ಕ್ರಿಯೆಯಿಂದಲ್ಲ. ಸಾಕ್ಷಾತ್ ಭಗವಂತನೇ ಈ ರೀತಿಯ ಲೋಕಸಂಗ್ರಹಾರ್ಥಕ್ರಮಕ್ಕೆ ಪರಮ ನಿದರ್ಶನ. ಪರಮ ಕರ್ಮಯೋಗಿಯೇ ಆತ. ತನಗೆ ಯಾವ ಸ್ವಾರ್ಥ ಲಾಭ ಉದ್ದೇಶಗಳಿಲ್ಲದಿದ್ದರೂ ಲೋಕ ಕಲ್ಯಾಣದ ದೃಷ್ಟಿಯಿಂದ, ಕ್ಷಣಮಾತ್ರವೂ ಬಿಡುವಿಲ್ಲದೇ ಸೃಷ್ಟ್ಯಾದಿ ಕಾರ್ಯಗಳಲ್ಲಿ ನಿರತನಾಗಿದ್ದಾನೆ. ಅನಂತಕರ್ಮಿಯಾದರೂ ಫಲಾಸಕ್ತಿಯಿಲ್ಲದ ಆತನಿಗೆ ಕರ್ಮದ ಲೇಪವಿಲ್ಲ. ಆತನ ಮೇಲ್ಪಂಕ್ತಿಯನ್ನೇ ಅನುಸರಿಸಿ ಅನೇಕ ಮುಮುಕ್ಷುಗಳು ಕರ್ಮಯೋಗದಲ್ಲಿ ತೊಡಗಿದರು. ಇತರ ಮಾನವರಿಗೂ ಅದು ಶ್ರೇಯಸ್ಕರಮಾರ್ಗ.

ಕೇವಲ ಬಾಹ್ಯದೃಷ್ಟಿಯಿಂದ ಕರ್ಮಸ್ವರೂಪವನ್ನು ನಿರ್ಧರಿಸುವುದು ಕಷ್ಟಸಾಧ್ಯ. ಕರ್ಮಗತಿ ಅತಿಗಹನ. ಕರ್ಮಗಳು ವಿವಿಧ. ಶಾಸ್ತ್ರನಿಷಿದ್ಧವಾದ ವಿಕರ್ಮಗಳೂ ವಸ್ತ್ರವಿಹಿತವಾದರೂ ಬಂಧಿಸುವ ಕಾಮ್ಯಕರ್ಮಗಳೂ ಅನಾಸಕ್ತಾಚರಣೆಯಿಂದ ಮುಕ್ತಿಗೆ ಸೋಪಾನವಾಗುವ ನಿತ್ಯ ನೈಮಿತ್ತಿಕ ಕರ್ಮಗಳೂ ಮುಕ್ತನ ಲೋಕಸಂಗ್ರಹಾರ್ಥ ಕರ್ಮಗಳೂ- ಎಲ್ಲವೂ ಕರ್ಮಗಳೇ. ಕರ್ಮವೆಂದು ತೋರಿದರೂ ವಾಸ್ತವವಾಗಿ ವಿಮೋಚಕವಾದ ಅಕರ್ಮವೇ ಆದವು ಕೆಲವು. ಅಕರ್ಮವೆಂದು ತೋರಿದರೂ ವಾಸ್ತವವಾಗಿ ಬಂಧಕವಾದ ಕರ್ಮವೇ ಆದವು ಕೆಲವು. ಸಂಗಮುಕ್ತನಾದವ ಎಂಥ ಕರ್ಮದಲ್ಲೇ ತೊಡಗಿದರೂ ಅವೆಲ್ಲ ಆತನ ಪಾಲಿಗೆ ಆಕರ್ಮವೇ. ಯಜ್ಞ ದೃಷ್ಟಿಯಿಂದ ಮಾಡಿದ ಆತನ ಕರ್ಮಗಳೆಲ್ಲವೂ ಕರಗಿ ಹೋಗುತ್ತವೆ (ಅಧ್ಯಾಯ ೪).

ಫಲಾಸಕ್ತಿಯನ್ನೂ ತಾನು ಕರ್ತಾ ಎಂಬ ಅಹಂಕಾರವನ್ನೂ ಬಿಟ್ಟು, ಕರ್ಮಬಂಧನದಿಂದ ಪಾರಾಗಲು, ಜ್ಞಾನದ ವಿಚಾರಮಾರ್ಗ ಮತ್ತು ಭಕ್ತಿಯ ಸಮರ್ಪಣಮಾರ್ಗಗಳೆರಡೂ ಸಹಕಾರಿಯಾಗುತ್ತವೆ.
ಜ್ಞಾನಮಾರ್ಗದಲ್ಲಿ ಆತ್ಮ ಅಕರ್ತ. ಪ್ರಕೃತಿಗತವಾದ ಸತ್ತ್ವ, ರಜಸ್, ತಮೋಗುಣಗಳಿಂದಲೇ ಕರ್ಮದ ಉತ್ಪತ್ತಿ ಮತ್ತು ಸ್ಥಿತಿಗಳು. ತಾನು ಕರ್ತನೆಂದು ಭಾವಿಸಿ ಕೊಳ್ಳುವವನು ಅಹಂಕಾರವಿಮೂಢನಾದ ಅಜ್ಞಾನಿ ಮಾತ್ರ. ಕರ್ಮವೆಲ್ಲ ಗುಣಗಳ ಲೀಲೆಯೆಂದರಿತ ಜ್ಞಾನಿ ಅವಕ್ಕೆ ಅಂಟಿಕೊಳ್ಳುವುದಿಲ್ಲ. ಆತ ಕಾಯೇನ ವಾಚಾ ಮನಸಾ ಕರ್ಮಗಳನ್ನು ನಡೆಸುತ್ತಿದ್ದರೂ ಕರ್ಮಲೇಪವಿಲ್ಲದೆ. ಆತ್ಮಶುದ್ಧಿಯನ್ನು ಸಾಧಿಸುತ್ತಿರುತ್ತಾನೆ. ಇಂಥ ಯುಕ್ತ ಶಾಶ್ವತ ಶಾಂತಿಯನ್ನು ಪಡೆಯುತ್ತಾನೆ; ಫಲ ಕಾಮಿಯಾದ ಅಯುಕ್ತ ಬದ್ಧನಾಗುತ್ತಾನೆ (ಅಧ್ಯಾಯ ೪).

ಜ್ಞಾನಿಗಳು ನುಡಿಯವ ನೈಷ್ಕಮರ್ಯ್‌ ಸ್ಥಿತಿ ಸಾಧನೆಯ ಅಂತಿಮ ಗುರಿಯೇ ಹೊರತು ಸಾಧನಾಮಾರ್ಗವಲ್ಲ. ಕರ್ಮವನ್ನಾರಂಭಿಸದೆಯೇ ನೈಷ್ಕಮರ್ಯ್‌ ಸ್ಥಿತಿಲಭಿಸದು. ಕೇವಲ ಕರ್ಮಸಂನ್ಯಾಸದಿಂದ, ಕರ್ಮತ್ಯಾಗದಿಂದ ಸಿದ್ಧಿ ದೊರೆಯದು. ತಾನು ಕರ್ತನಲ್ಲ, ತನಗೆ ಕರ್ಮವಿಲ್ಲವೆಂಬ ನಿಶ್ಚಿತ ಭಾವನೆಯೇ ಕರ್ಮಸಂನ್ಯಾಸ. ಕರ್ಮಯೋಗ ಮಾರ್ಗವೇ ಶ್ರೇಷ್ಠ. ಯೋಗವಿಲ್ಲದೇ ಸಂನ್ಯಾಸ ಅಲಭ್ಯ. ಕರ್ಮಫಲವನ್ನಾಶ್ರಯಿಸಿದೆ, ನಿಯತ ಕರ್ಮಗಳನ್ನು ನಡೆಸುವವನೇ ನಿಜವಾದ ಯೋಗಿ (III ೪, ಗಿ, ೨, ೬, ೮, ೯, ಗಿI,I,) ಆತನೆ ಸಂನ್ಯಾಸಿ; ವಿಹಿತ ಕರ್ಮವನ್ನು ಬಿಟ್ಟವನಲ್ಲ (ಅಧ್ಯಾಯ ೩,೪,೬).
ದೇಹ ಧರಿಸುವವರೆಗೆ ಅಶೇಷ ಕರ್ಮತ್ಯಾಗ ಸಾಧ್ಯವೇ ಇಲ್ಲ. ಆದ್ದರಿಂದ ತ್ಯಾಗಿಯೆಂದರೆ ಕರ್ಮಫಲತ್ಯಾಗಿಯೇ. ಕಾಮ್ಯಕರ್ಮಗಳ ತ್ಯಾಗ ಶಾಸ್ತ್ರಾನುಮತವಾದರೂ ಯಜ್ಞ, ದಾನ, ತಪಃಕರ್ಮಗಳು ಯಾರಿಗೂ ತ್ಯಾಜ್ಯವಲ್ಲ. ಆದರೆ ಅವುಗಳನ್ನೂ ನಿಸ್ಸಂಗವಾಗಿ ಫಲಾಸಕ್ತಿಯಿಲ್ಲದೆ ಆಚರಿಸಬೇಕು. ಇದು ಗೀತೆಯ ನಿಶ್ಚಿತ ಅಭಿಪ್ರಾಯ. ಕರ್ಮದಿಂದ ಉದ್ಭವಿಸುವ ಇಷ್ಟ ಅನಿಷ್ಟ ಮಿಶ್ರಫಲವಾವುದರ ಲೇಪವೂ ತ್ಯಾಗಿಗೆ ಇಲ್ಲ. ಅವು ಅತ್ಯಾಗಿಗೆ ಮಾತ್ರ (ಅದ್ಯಾಯ ೧೮).

ಮತ್ತೊಂದು ದೃಷ್ಟಿಯಿಂದ ಪರಿಶೀಲಿಸಿದರೆ, ಕರ್ಮಸ್ಥಾನ, ಕರ್ತ, ಕರಣ, ಕ್ರಿಯಾವಿಧಾನ ಮತ್ತು ಅದೃಷ್ಟ (ದೈವ)-ಇವು ಐದು ಕಾರಕಗಳೇ ಹೊರತು ಕೇವಲ ಆತ್ಮನಲ್ಲ. ಆದ್ದರಿಂದಲೂ ಕರ್ತೃತ್ವಾಭಿಮಾನ ಸಲ್ಲದು. ಈ ರೀತಿಯ ಪರಿಪಕ್ವ ದೃಷ್ಟಿಯಿಂದ ಅಹಂಕಾರ ಬುದ್ಧಿರಹಿತನಾದವ ಏನನ್ನೇ ಮಾಡಿದರೂ ಈ ಲೋಕಗಳನ್ನೇ ಸಂಹರಿಸಿದರೂ ಬಂಧನಕ್ಕೆ ಒಳಗಾಗುವುದಿಲ್ಲ (ಅಧ್ಯಾಯ ೧೮). ಭಕ್ತಿಮಾರ್ಗದಲ್ಲಿ, ಸಕಲ ಕರ್ಮಗಳಿಗೂ ಭಗವಂತನೇ ಮೂಲ, ಮಧ್ಯ, ಫಲ; ಸಕಲ ಯಜ್ಞಗಳ ಕರ್ತ, ಭೋಕ್ತಾ ಮತ್ತು ಪ್ರಭುವೂ ಆತನೇ. ಕರ್ಮೋತ್ಪಾದಕ ಪ್ರಕೃತಿಗೆ ಶಕ್ತಿ ಬರುವುದೂ ಅವನಿಂದಲೇ. ಆದ್ದರಿಂದ ನಮ್ಮ ಲೌಕಿಕ ಧಾರ್ಮಿಕ ಎಲ್ಲ ಕರ್ಮಗಳನ್ನೂ ಆತನಿಗೆ ಸಮರ್ಪಣೆಯಾಗುವಂತೆ ಮಾಡುವುದೇ ಪರಮೋಪಾಯ. ಅದೇ ಶುಭಾಶುಭ ಫಲಗಳಿಗೆ ಒಳಗಾಗದೇ ಕರ್ಮಬಂಧನದಿಂದ ಪಾರಾಗುವ ಮಾರ್ಗ (ಅಧ್ಯಾಯ ೪,೫,೯,೧೨).

ಇಂಥ ಕರ್ಮಯೋಗಿಗೆ ಮಾಡಬೇಕಾದ ಕರ್ಮದಲ್ಲಿ ಉಚ್ಚ ನೀಚ ಭಾವನೆಯಾಗಲೀ ರಾಗದದ್ವೇಷವಾಗಲೀ ಇಲ್ಲ. ತನ್ನ ಪಾಲಿಗೆ ಬಂದ ಸ್ವಧರ್ಮಾನುಗುಣ ಕರ್ಮವನ್ನು ಆತ ನಿರಂಹಕಾರ ಭಾವನೆಯಿಂದ ಮಾತ್ರವಲ್ಲದೆ ಧೃತಿ ಉತ್ಸಾಹಗಳಿಂದಲೂ ನಡೆಸುತ್ತಾನೆ. ಸ್ವಭಾವ ನಿಯತವಾದ ಅನಿವಾರ್ಯ ಸ್ವಕರ್ಮವನ್ನೇ ಭಗವಂತನ ಆರಾಧನೆಯ ರೂಪದಲ್ಲಿ, ಶ್ರದ್ಧೆಯಿಂದ, ಆಚರಿಸುವುದೇ ಸಂಸಿದ್ಧಿ ಲಾಭಕ್ಕೆ ಉಪಾಯ (ಅಧ್ಯಾಯ ೧೮).

ಸ್ವಧರ್ಮ, ಸ್ವಕರ್ಮಾಚರಣೆಯಲ್ಲಿ ಸಾಧಕನಿಗೆ ಯಾವ ರೀತಿಯ ಪಾಪಭೀತಿ ಯಾಗಲೀ ದೌರ್ಬಲ್ಯ ಭಾವನೆಗಳಾಗಲೀ ಸಲ್ಲದು. ಎಲ್ಲವನ್ನೂ ಮಾಡಿಸುವಾತ ಭಗವಂತ. ಮಾನವ ಆತನ ನಿಮಿತ್ತ ಮಾತ್ರನಾದರೆ ಸಾಕು (ಅಧ್ಯಾಯ ೨,೯,೧೮). 

ಈ ರೀತಿಯಾಗಿ ಮಾನವನನ್ನು ಪರಮ ಶ್ರೇಯಸ್ಸಿನ ಪ್ರಾಪ್ತಿಗೆ ಅಣಿಗೊಳಿಸಲು ಅನಿವಾರ್ಯ ಕರ್ಮವೇ ಮುಕ್ತಿಗೆ ಸೋಪಾನವಾಗುವಂತೆ, ಗೀತೆ ಕರ್ಮಮಾರ್ಗವನ್ನು ನಿರೂಪಿಸಿದೆ. ಕರ್ಮಗಳ ಆಚರಣೆ ಚಿತ್ತಶುದ್ಧಿಗಾಗಿ, ಭಗವತ್ಪ್ರೀತಿಗಾಗಿ ಹೊರತು, ಅವುಗಳ ಅಲ್ಪ ಫಲಗಳಿಗಾಗಿ ಅಲ್ಲ. ಕರ್ಮಕ್ಕೆ ಮಾತ್ರ ಅಧಿಕಾರ, ಫಲಕ್ಕಲ್ಲ. ಆದರೆ ಫಲವೇ ಇಲ್ಲವೆಂದಲ್ಲ. ಯೋಗ್ಯಕರ್ಮಾನುಷ್ಠಾನದಿಂದ ಅಮೂಲ್ಯ ಫಲಗಳಾದ ಏಕಾಗ್ರಬುದ್ದಿ, ಚಿತ್ತಪ್ರಸನ್ನತೆ ಮತ್ತು ಪರಮ ಸುಖಶಾಂತಿಗಳು ಲಭಿಸುತ್ತವೆ. 

ಯುಧ್ಯಸ್ವ ವಿಗತ ಜ್ವರಃ; ಅಸಕ್ತೋಹ್ಯಾಚರನ್ ಕರ್ಮ ಪರಮಾಪ್ನೋತಿ ಪುರುಷಃ_ಇದು ಕೃಷ್ಣ ಅರ್ಜುನನಿಗೆ ಬೋಧಿಸಿದ ಕರ್ಮಯೋಗದ ತಿರುಳು.

‘ಶುಷ್ಕ ಕರ್ಮಿಯಾಗಬೇಡ. ಅಲ್ಪ ಫಲಗಳಿಗಾಗಿ ಆಸೆ ಪಟ್ಟು, ಕರ್ಮದಲ್ಲಿ ತೊಡಗಿ, ತೊಳಲಬೇಡ. ಆದರೆ ತಪ್ಪು ತಿಳಿವಳಿಕೆಯಿಂದ, ತಾಮಸ ಭಾವನೆಯಿಂದ, ಕರ್ಮವನ್ನು ತ್ಯಜಿಸಲೂ ಬೇಡ. ಜೀವನ ಸಂಗ್ರಾಮದ ಎಲ್ಲ ಕರ್ತವ್ಯಗಳನ್ನೂ ವೀರನಂತೆ ನಿರ್ವಹಿಸು. ಆದರೆ ಅಹಂಕಾರ, ಕಾತರಗಳನ್ನು ಬಿಡು. ಸರ್ವಾಂತರ್ಯಾಮಿಯೂ ಶಕ್ತಿಮೂಲನೂ ಆದ ಪರಮಾತ್ಮನಲ್ಲಿ ಸಕಲ ಕರ್ಮಗಳನ್ನೂ ಸಮರ್ಪಿಸಿ, ವ್ಯರ್ಥ ಆಸೆ ಅಭಿಮಾನಗಳನ್ನೂ ತೋರೆದು, ಶಾಂತನಾಗಿ ಹೋರಾಡು. ಅಸಕ್ತ ಕರ್ಮಾಚರಣೆಯೇ ಪರಮ ಪದಕ್ಕೆ ಮಟ್ಟಲು’_ಇದೇ ಗೀತೆಯ ಕರ್ಮಯೋಗದ ಸಾರ.
ಗೀತೆಯ ಕರ್ಮಯೋಗ ವಿಭಾಗ ಮಹಾತ್ಮ ಗಾಂಧೀಜಿಯವರ ಮೆಚ್ಚಿನ ಭಾಗವಾಗಿತ್ತು. ಅನಾಸಕ್ತಿಯೋಗವೆಂಬ ಹೆಸರಿನಲ್ಲವರು ಗೀತೆಗೆ ತಮ್ಮದೇ ಆದ ವ್ಯಾಖ್ಯಾನ ಬರೆದಿದ್ದಾರೆ. ನಿಷ್ಕಾಮ ಕರ್ಮ ಅವರ ಭೋಧನೆಯ ಮುಖ್ಯಾಂಶವಾಗಿದ್ದಂತೆ ಅವರ ವೈಯಕ್ತಿಕ ಜೀವನದ ದಾರಿದೀಪವೂ ಆಗಿತ್ತು. (ನೋಡಿ-ಭಗವದ್ಗೀತೆ)	(ಎಸ್.ಡಬ್ಲ್ಯು.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ